ಚಾಪ್ಲಿನ್, ಚಾಲ್ರ್ಸ್ ಸ್ಪೆನ್ಸರ್

	1889-1977. ಆಂಗ್ಲ ಚಲನಚಿತ್ರ ನಟ ಮತ್ತು ನಿರ್ದೇಶಕ. ಚಾರ್ಲಿ ಎಂಬ ವಿಶಿಷ್ಟವಾದ ಹಾಸ್ಯಪಾತ್ರವನ್ನು ಸೃಜಿಸಿ ಇಂಗ್ಲಿಷ್ ಚಲನಚಿತ್ರದಲ್ಲಿ ಅದ್ವಿತೀಯವಾಗಿ ಮೆರೆದ ಕಲಾವಿದ. ಈತ ಸೌತ್ ಲಂಡನ್ನಿನಲ್ಲಿ 1889ರ ಏಪ್ರಿಲ್ ತಿಂಗಳ 16ನೆಯ ತಾರೀಖು ಹುಟ್ಟಿದ. ಈತನ ತಂದೆತಾಯಿಗಳು ಚಾಲ್ರ್ಸ್ ಮತ್ತು ಹೆನ್ನ ಚಾಪ್ಲಿನ್ನರು. ವೃತ್ತಿಯಿಂದ ಇಬ್ಬರೂ ನಟರೆ. ಆದರೆ ಇವರು ಇದರಲ್ಲಿ ಕಂಡ ಹಣ, ಸೌಖ್ಯ ಎರಡೂ ಕಡಿಮೆ. ಚೊತೆಗೆ ಚಾಪ್ಲಿನ್ನನ ತಾಯಿ ಮಾನಸಿಕ ರೋಗಿ. ಚಿಕಿತ್ಸೆಗಾಗಿ ಆಗಾಗ್ಗೆ ಆಸ್ಪತ್ರೆ ಹೊಕ್ಕು ಬರುವುದು ನಡದೇ ಇತ್ತು. ಸ್ವಲ್ಪ ಕಾಲದಲ್ಲಿ ತಂದೆ ತೀರಿಕೊಂಡ. ಚಾಪ್ಲಿನ್ ಅನಾಥಾಶ್ರಮಗಳಲ್ಲಿ ಬೋರ್ಡಿಂಗ್ ಶಾಲೆಗಳಲ್ಲಿ ವ್ಯಾಸಂಗ ಮಾಡಿದ. ಅನಂತರ ತನ್ನ ಮಲ ಅಣ್ಣನ ಜೊತೆ ವಿವಿಧ ವಿನೋದಾವಳಿ ಕಂಪನಿಯೊಂದರಲ್ಲಿ ಹಾಸ್ಯ ನಟನಾಗಿ ಸೇರಿದ. ಇಲ್ಲಿಂದಲೇ ಈತನ ಕೀರ್ತಿಯ ಕತೆ ಪ್ರಾರಂಭವಾಯಿತು ಎನ್ನಬಹುದು. 1910ರಲ್ಲಿ ಕಾರ್ನೊ ಕಾಮೆಡಿ ಕಂಪನಿಯಲ್ಲಿ ಈತ ಮುಖ್ಯ ಹಾಸ್ಯ ನಟನಾದ.

	ಈ ಕಂಪನಿ ಇಂಗ್ಲೆಂಡಿನಲ್ಲಿ ಪರ್ಯಟನೆ ಮಾಡಿದ ಅನಂತರ ಅಮೆರಿಕಕ್ಕೆ ಹೋಯಿತು. ಇಲ್ಲೇ ಈತ ತನ್ನ ಜೀವನದ ನಿರ್ಣಾಯಕ ತಿರುವನ್ನು ಪಡೆದದ್ದು. ಹಾಸ್ಯಚಿತ್ರಗಳನ್ನು ತಯಾರಿಸುತ್ತಿದ್ದ ಕ್ಯಾಲಿಫೋರ್ನಿಯದ ಕೀಸ್ಟೋನ್ ಕಂಪನಿ ಈತನನ್ನು ವಾರಕ್ಕೆ 150 ಡಾಲರ್ ವೇತನದ ಮೇಲೆ ನಟಿಸಲು ಆಹ್ವಾನಿಸಿತು. ಚಲನಚಿತ್ರ ಜೀವನ ಆರಂಭವಾದ ಅನಂತರ ಚಾಪ್ಲಿನ್ ಎಂದೂ ರಂಗನಾಟಕಗಳತ್ತ ಕಣ್ಣು ಹರಿಸಲಿಲ್ಲ. 

	ಕೀಸ್ಟೋನ್ ಕಂಪನಿಯೊಡನೆ ಕೆಲಸ ಮಾಡಿದ ಒಂದು ವರ್ಷದ (1914) ಅವಧಿಯಲ್ಲಿ ಚಾಪ್ಲಿನ್ ಮೂವತ್ತೆರಡು ಚಿತ್ರಗಳಲ್ಲಿ ಕಾಣಿಸಿಕೊಂಡ. ಮೇಕಿಂಗ್ ಎ ಲಿವಿಂಗ್ ಮತ್ತು ಕಿಡ್ ಅಟೊ ರೇಸಸ್ ಚಿತ್ರಗಳಲ್ಲಿ ಪ್ರೇಕ್ಷಕರನ್ನು ಈತ ಬಹುವಾಗಿ ಆಕರ್ಷಿಸಿದ. 1915ರಲ್ಲಿ 1,250 ಡಾಲರಿನ ವೇತನದ ಮೇಲೆ ಎಸ್ಸಾನ್ ಕಂಪನಿಯನ್ನು ಸೇರಿದ. ಈ ಕಂಪನಿಯಲ್ಲಿದ್ದಾಗಲೆ ಚಾಪ್ಲಿನ್ ತನ್ನ ವಿಶಿಷ್ಟವಾದ ಚಾರ್ಲಿ ಪಾತ್ರವನ್ನು ಸೃಷ್ಟಿಸಿದ್ದು. ಚಾರ್ಲಿ ಒಬ್ಬ ಅಲೆಮಾರಿ. ತೆಳ್ಳನೆಯ, ಸಣ್ಣನೆಯ, ಅದ್ರ್ರದೃಷ್ಟಿಯ ಮನುಷ್ಯ; ಹಿಟ್ಲರ್ ಮೀಸೆ, ದೇಹಕ್ಕೆ ತುಂಬ ಚಿಕ್ಕದು ಅನ್ನಿಸುವ ಕೋಟು, ದೊಗಳೆ ಷರಾಯಿ, ಡರ್ಬಿ ಹ್ಯಾಟು, ಕೈಲಿ ಬೆತ್ತ, ಕಾಲಿಗೆ ತುಂಬ ದೊಡ್ಡದಾದ ಬೂಟು-ಹೀಗೆ ಅಲಂಕೃತನಾದ ಚಾರ್ಲಿ ಅನುಕಂಪಶೀಲ. ಮನುಷ್ಯಪ್ರೇಮಿ. ಆದರೆ ಭಾವುಕನಲ್ಲ. ಬಡತನ ಕಲಿಸಿದ ಹಲವು ಬಗೆಯ ಚಾಲಾಕು ಅವನಲ್ಲಿದೆ; ಹಾಗೆ, ಅವಮಾನದಿಂದ ಬರುವ ಅಹಂಕಾರ ಕೂಡ. ಚಾರ್ಲಿ ನಗುನಗುತ್ತಲೇ ಬಾಳಿನ ವಿಷಮತೆಗಳನ್ನು ದುರಂತಗಳನ್ನು ಕಾಣಿಸುತ್ತ ಪ್ರೇಕ್ಷಕರ ಕಣ್ಣು ಹನಿಗೂಡುವಂತೆ ಮಾಡುತ್ತಾನೆ.

	ಚಾರ್ಲಿ ಪಾತ್ರ ಸೃಷ್ಟಿಯಿಂದಾಗಿ ಚಾಪ್ಲಿನ್ನನ ಜನಪ್ರಿಯತೆ ಅಗಾಧವಾಗಿ ಬೆಳೆಯಿತು; ಅದರ ಜೊತೆಗೆ ಅವನ ವರಮಾನವು ಹೆಚ್ಚಿತು. ದಿ ಮ್ಯೂಚುಯಲ್ ಕಂಪನಿಯೊಡನೆ ಹನ್ನೆರಡು ಚಿತ್ರಗಳಿಗೆ ಸಹಿ ಹಾಕಿದಾಗ ಅವನಿಗೆ ಬಂದ ಹಣ 6,70,000 ಡಾಲರು. ದಿ ಫಸ್ಟ್ ನ್ಯಾಷನಲ್ ಕಂಪನಿಯೊಡನೆ ಎಂಟು ಚಿತ್ರಗಳಿಗೆ ಒಪ್ಪಿಕೊಂಡಾಗ ಅದು 10,00,000 ಡಾಲರಿಗೆ ಏರಿತು. ಇದಾದ ಅನಂತರ ಯಾವ ಕಂಪನಿಯೂ ಈತನನ್ನು ಹಣ ಕೊಟ್ಟು ನಿಯಮಿಸಿಕೊಳ್ಳುವುದು ದುಸ್ಸಾsಧ್ಯವಾಯಿತು. 1920ರಲ್ಲಿ ಚಾಪ್ಲಿನ್ ಹಾಲಿವುಡ್‍ನಲ್ಲಿ ಸ್ವಂತ ಸ್ಟುಡಿಯೊವನ್ನು ಕಟ್ಟಿದ.

	1930ರ ವೇಳೆಗೆ ವಾಕ್ಚಿತ್ರಗಳು ಮೂಕಚಿತ್ರಗಳ ಸ್ಥಾನವನ್ನು ಆಕ್ರಮಿಸಿದರೂ ಚಾಪ್ಲಿನ್ ಮಾತ್ರ ಮೂಕಚಿತ್ರಗಳ ತಯಾರಿಕೆಯನ್ನು ನಿಲ್ಲಿಸಲಿಲ್ಲ. ಸಂಭಾಷಣೆ ಇಲ್ಲದ ಮೂಕಚಿತ್ರಗಳನ್ನು 1930ರ ಅನಂತರವೂ ತಯಾರಿಸಿದ. ಅವುಗಳಲ್ಲಿ ಸಿಟಿ ಲೈಟ್ಸ್ (1931) ಮತ್ತು ಮಾಡರ್ನ್ ಟೈಮ್ಸ್ (1936) ಚಿತ್ರಗಳು ಮುಖ್ಯವಾದವು. 1940ರಲ್ಲಿ ಚಾಪ್ಲಿನ್‍ನ ಮೊದಲ ವಾಕ್ಚಿತ್ರ ದಿ ಡಿಕ್ಟೇಟರ್ ಬೆಳಕು ಕಂಡಿತು. ಇದಾದಮೇಲೆ ಬಂದ ಮೆಸ್ಯರ್ ವರ್ಡೊ (1947) ಮತ್ತು ಲೈಮ್ ಲೈಟ್(1952)-ಇವು ಚಾರ್ಲಿಯನ್ನು ರಾಜಕೀಯವಾಗಿ ವಿವಾದಾಸ್ಪದ ವ್ಯಕ್ತಿಯನ್ನಾಗಿಸಿದುವು. 1952ರಲ್ಲಿ ವಿಶ್ವ ಪ್ರವಾಸಕ್ಕೆಂದು ಹೊರಟ ಚಾಪ್ಲಿನ್ ಮತ್ತೆ ಅಮೆರಿಕಕ್ಕೆ ವಾಪಸ್ಸಾದದ್ದು ಸುಮಾರು ಎರಡು ದಶಕಗಳ ಅನಂತರ. ಎ ಡಾಗ್ಸ್ ಲೈಫ್ (1918); ಷೋಲ್ಡ್‍ರ್ ಅರಮ್ಸ್ (1918); ಸನಿ ಸೈಡ್ (1919); ಎ ಡೇಸ್ ಪ್ಲಷರ್ (1919); ದಿ ಕಿಡ್ (1921); ದಿ ಐಡ್ಲ್ ಕ್ಲಾಸ್ (1920); ಪೇ ಡೇ (1922); ದಿ ಪಿಲ್ ಗ್ರಿಂ (1923); ಎ ವುಮನ್ ಆಫ್ ಪ್ಯಾರಿಸ್ (1923); ದಿ ಗೋಲ್ಡ್ ರಷ್ (1925); ದಿ ಸರ್ಕಸ್ (1928); ಸಿಟಿ ಲೈಟ್ಸ್ (1931); ಮಾಡರ್ನ್ ಟೈಮ್ಸ್ (1936); ದಿ ಗ್ರೇಟ್ ಡಿಕ್ಟೇಟರ್ (1940); ಮೆಸ್ಯರ್ ವರ್ಡೊ (1947); ಲೈಮ್ ಲೈಟ್ (1952), ಎ ಕಿಂಗ್ ಇನ್ ನ್ಯೂ ಯಾರ್ಕ್ (1957)- ಇವು ಈತನ ಕೆಲವು ಮುಖ್ಯ ಚಿತ್ರಗಳು.

	ಚಾಪ್ಲಿನ್ ನಾಲ್ಕು ಬಾರಿ ಮದುವೆಯಾದ. ಮಿಲ್ಡ್ರೆಡ್ ಹ್ಯಾರಿಸ್ (1918), ಲಿಟಾ ಗ್ರೆ (1924), ಪಾಲೆಟ್ ಗೊಡಾರ್ಡ್ (1936) ಮತ್ತು 1943ರಲ್ಲಿ ಖ್ಯಾತ ನಾಟಕಕಾರ ಓನೀಲ್‍ನ ಮಗಳು ಊನಾ ಓನೀಲ್.

	ಚಾಪ್ಲಿನ್ ತನ್ನ ಆತ್ಮಕಥೆಯನ್ನು 1964ರಲ್ಲಿ ಪ್ರಕಟಿಸಿದ. ಇದು ಎಷ್ಟು ಜನಪ್ರಿಯವಾಯಿತೆಂದರೆ ಅದೇ ವರ್ಷ. ಮೊದಲ ಪ್ರಕಟಣೆ ಮುಗಿಯುವ ಒಳಗೆ ಅದು ಮೂರು ಮುದ್ರಣಗಳನ್ನು ಕಂಡಿತು. ಚಾಪ್ಲಿನ್ ಬಹು ಸುಲಭವಾದ ಲಘು ಶೈಲಿಯಲ್ಲಿ ತನ್ನ ಜೀವನದ ಪ್ರಮುಖ ಘಟನೆಗಳನ್ನೂ ತಾನು ಕಂಡ ಮಹಾಪ್ರಭೃತಿಗಳೊಡನೆ ನಡೆದ ಸಂಭಾಷಣೆಗಳನ್ನೂ ಚಿತ್ರಿಸಿದ್ದಾನೆ. 1972ರಲ್ಲಿ ನ್ಯೂಯಾರ್ಕ್‍ನಗರ ಮತ್ತು ಲಾಸ್ ಏಂಜಲೀಸ್‍ನಲ್ಲಿ ಇವನನ್ನೂ ಗೌರವಿಸಲು ಏರ್ಪಡಿಸಿದ್ದ ಸಮಾರಂಭದಲ್ಲಿ  ಭಾಗವಹಿಸಿದ್ದನು. ಇದೇ ವರ್ಷ ಏಪ್ರಿಲ್ನಲ್ಲಿ ಗೌರವ ಆಸ್ಕರ್ ಪ್ರಶಸ್ತಿಯನ್ನು ನೀಡಲಾಯಿತು. 1975ರಲ್ಲಿ ಇಂಗ್ಲೆಂಡಿನ ರಾಣಿ ಎಲಿಜಬತ್‍ಳು ನೈಟ್‍ವುಡ್ ಗೌರವ ಪದವಿಯನ್ನು ಅರ್ಪಿಸಿದಳು. ಇವನು ಡಿಸೆಂಬರ್ 25, 1977ರಂದು ಮರಣ ಹೊಂದಿದನು.		(ಡಿ.ಎ.ಎಸ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ